ಅವಳೆಂಬ ಕಲ್ಲಿಕೋಟೆ!
First Published: 15 Dec 2013 02:00:00 AM IST
ಕನಸೊಳಗೆ ಓಡಿದ ರಿಯಾಲಿಟಿ ರೈಲು
ದಿನದ ಹತ್ತೆಂಟು ಗಂಟೆ ಕಂಪ್ಯೂಟರಿನ ಕಂಟ್ರೋಲಿನಲ್ಲಿರುವ ನಾವು, ಸಂಡೆ ಒಂದು ದಿನವಾದರೂ ಮನಸ್ಸು ಮತ್ತು ದೇಹವನ್ನು ಹದ್ದುಬಸ್ತಿನಲ್ಲಿಡಲು ಯತ್ನಿಸುತ್ತೇವೆ. ಅಂಥವರಲ್ಲಿ ನಾನೂ ಒಬ್ಬ. ವಾರದ ಆರು ದಿನದ ಒತ್ತಡವನ್ನು ಒಂದು ದಿನದಲ್ಲಿ ರಿಕವರಿ ಮಾಡುವ ಯುಗದಲ್ಲಿ ನಾವಿದ್ದೇವೆ. ಆ ಭಾನುವಾರ ನಮಗೆ ಹೊಳೆದ ಐಡಿಯಾ ಎಂದರೆ ಟ್ರಕ್ಕಿಂಗ್.
ಚಾರಣಕ್ಕೆ ದೇಹ ಮತ್ತು ಮನಸ್ಸಿಗೆರಡಕ್ಕೂ ಮುದ ನೀಡುವ ತಾಕತ್ತಿದೆ. ಈ ಬಾರಿ ಹೊರಟಿದ್ದು ನಾವು ಕಲ್ಲಿಕೋಟೆಯ ವಡಕರ ಬೆಟ್ಟ ಮತ್ತು ಗುಹೆಗಳಿಗೆ. ಶನಿವಾರ ರಾತ್ರಿ ರೈಲಿಗೆ ಹೊರಟ ನಾವು ಬೋಗಿಯನ್ನೇ ನಮ್ಮದಾಗಿಸಿಕೊಂಡೆವು. ಹಾಡು, ಹರಟೆ, ಡಾನ್ಸ್‌ಗಳ ಭರಾಟೆ ಜೋರಾಗಿಯೇ ಸಾಗಿತ್ತು. ಅಗ ಪರಶು 'ಏನೋ ಯಾವ್ದೋ ಲವ್ ಗುಂಗಲ್ಲಿ ಇದ್ದೀಯಾ?' ಎಂದ. ನಾನು 'ಏನ್ ಇಲ್ಲ ಬಿಡಪ್ಪ. ಎಲ್ಲಾ ಸುಮ್ನೆ ಟೈಮ್‌ಪಾಸ್' ಅಂದೆ. ತಕ್ಷಣ ಅರಿಸ್ಟಾಟಲ್‌ರಂತೆ ಒಬ್ಬೊಬ್ಬರು ಒಂದೊಂದು ವ್ಯಾಖ್ಯಾನ ನೀಡತೊಡಗಿದರು. ಸರ್ಫ್‌ರಾಜನಿಗೆ ಲವ್ ಅಂದ್ರೆ ಈಗಿನ ಹಿಂದಿ ಫಿಲ್ಮ್, ಪರಶುಗೆ ಯೋಗರಾಜ್ ಭಟ್ಟರ 'ಪರಮಾತ್ಮ', ಇನ್ನು ಸಂತೋಷನಿಗೆ ಎಂಬತ್ತರ ದಶಕದ ಕನ್ನಡ ಫಿಲ್ಮ್- ಹೀಗೆ ವಾಗ್ವಾದಗಳ ನಡುವೆ ಒಬ್ಬೊಬ್ಬರಾಗಿ ನಿದ್ರೆಗೆ ಜಾರಿದರು.
ನನಗೆ ಮಾತ್ರ ರಾತ್ರಿ ಮೂರಾದರು ನಿದ್ದೆ ಬರಲಿಲ್ಲ. ನ್ಯೆಸರ್ಗಿಕ ಎಸಿಯನ್ನು ಅನುಭವಿಸಲು ಬೋಗಿಯ ಡೋರ್ ಬಳಿ ಬಂದೆ. ಅಹ್ಲಾದಕರ ತಂಗಾಳಿಯ ಸ್ಪರ್ಶದಲ್ಲಿರುವಾಗ ಕೆಳಗೊಂದು ಡೈರಿ ಕಾಣಿಸಿತು. ಯಾರೋ ಬಿಟ್ಟು ಹೋಗಿರಬೇಕೆಂದು ಕೈಗೆತ್ತಿಕೊಂಡೆ. 'ಎಂದಿರನ್'ನ ಚಿಟ್ಟೆಯ ವೇಗದಲ್ಲಿ ಪುಟವನ್ನು ತಿರುಚುತ್ತಿದ್ದೆ. ಯಾಕೋ ಅದನ್ನು ಓದಬೇಕೆಂಬ ಮನಸ್ಸಾಯಿತು.
ಅದು ವನಿತಾ ಎಂಬವಳ ಆತ್ಮಕಥೆಯಾಗಿತ್ತು. ಇಂದಿನ ಯಾಂತ್ರಿಕ ಬದುಕಿನೊಳಗೆ ಸಿಕ್ಕು ನಲುಗಿದವಳು ಅವಳು. ಮಲೆನಾಡಿನ ಹಳ್ಳಿಯಲ್ಲಿ ಬೆಳೆದ ಅವಳನ್ನು ಸಾಫ್ಟ್‌ವೇರ್ ಉದ್ಯೋಗಿಯೊಡನೆ ಮದ್ವೆ ಮಾಡ್ತಾರೆ. ಐಟಿ ಬಿಟಿ ಕೆಲಸದಲ್ಲಿರುವವರ ಕ್ಯಾರೆಕ್ಟರ್ ನೋಡದೆ, ಕಣ್ಮುಚ್ಚಿಕೊಂಡು ಮದ್ವೆ ಮಾಡಿಕೊಡುವುದು ಹಳ್ಳಿಗಳಲ್ಲಿ ಸಾಮಾನ್ಯ. ಇವಳಿಗೆ ಅವನಲ್ಲಿ ತನ್ನ ಭಾವನೆಗಳನ್ನು ಹಂಚಿಕೊಳ್ಳುವುದಕ್ಕೆ ಸಾಧ್ಯವೇ ಅಗಲಿಲ್ಲ. ಅವನೂ ಇವಳನ್ನು ಅರ್ಥಮಾಡಿಕೊಳ್ಳಲಿಲ್ಲ. ದೈಹಿಕ ಸುಖದಲ್ಲೂ ಇದು ಸಾಧ್ಯವಾಗಲಿಲ್ಲ. ಅವಳು ತನ್ನ ತಲ್ಲಣಗಳನ್ನು ಹಂಚಿಕೊಳ್ಳುವ ಜೀವಕ್ಕಾಗಿ ಹಾತೊರೆಯುತ್ತಿದ್ದಳು. ಅವಳ ತಾಯಿಯೂ ಇವಳ ಭಾವನೆ ಅರ್ಥಮಾಡಿಕೊಳ್ಳಲು ವಿಫಲಳಾದಳು.
ದ್ಯೆಹಿಕ ಸುಖದಲ್ಲೂ ಇವಳೊಡನೆ ತೃಪ್ತಿ ಪಡೆಯದ ಗಂಡ ವೇಶ್ಯೆಯರ ಸಂಗ ಮಾಡಿದ. ಕೆಲ ತಿಂಗಳ ನಂತರ ಸತ್ತೂ ಹೋದ. ಇತ್ತ ಇವಳ ಮನಸ್ಸಿನ ತಲ್ಲಣಗಳು ಸುನಾಮಿಯ ರೀತಿಯಲ್ಲಿ ಎದ್ದುಬರುತ್ತಲೇ ಇದ್ದವು. ದಿಕ್ಕೇ ಕಾಣದೆ ಈಕೆ ಆತ್ಮಹತ್ಯೆ ಮಾಡಿಕೊಳ್ಳಲು ಹೋದಾಗ ಗಣೇಶ ಎಂಬಾತ ಅವಳನ್ನು ತಡೆದ. ಸಮಾಧಾನಿಸಿದ. ಅಂದಿನಿಂದ ಅವಳು ತನ್ನೆಲ್ಲ ಸುಖ-ದುಃಖಗಳನ್ನು ಅವನೆದುರು ಹಾಸಿಡತೊಡಗಿದಳು.
ತನಗರಿಯಂದತೆ ಗಣೇಶನನ್ನು ಪ್ರೀತಿಸತೊಡಗಿದಳು. ಇದು ತಪ್ಪೆಂದು ಅನ್ನಿಸಿದರೂ ತಡೆಯಲು ಸಾಧ್ಯವಾಗಲಿಲ್ಲ. ಕಾರಣ ಗಣೇಶನಿಗೆ ಆಗಲೇ ಮದ್ವೆಯಾಗಿದೆ. ಗಣೇಶನಿಗೆ ಆಕೆ ಮಹತ್ತರ ಸ್ಥಾನ ನೀಡಿದಳು. ತನ್ನ ಎದೆಬಡಿತ ಇಂದಿಗೂ ಬಡಿಯುತ್ತಿದೆ ಎಂದರೆ ಅದು ಅವನಿಗೋಸ್ಕರ ಎಂಬಂತೆ ಪುಳಕಗೊಂಡಳು. ಆದರೆ, ತನ್ನ ಪ್ರೀತಿಯ ಬಗ್ಗೆ ಅವನೊಡನೆ ಒಂದು ಮಾತೂ ಹೇಳಲಿಲ್ಲ. ಅವಳಿಗಿದ್ದಿದ್ದು ಒಂದೇ ಒಂದು ಆಸೆ ಮಾತ್ರ; ತಾನೀ ಲೋಕ ತೊರೆಯುವುದರೊಳಗೆ ತನ್ನ ದೇಹ ಮತ್ತು ಮನಸ್ಸುಗಳೆರಡನ್ನೂ ಸಂಪೂರ್ಣವಾಗಿ ಅವನಿಗೆ ಅರ್ಪಿಸುವುದು. ಆದರೆ, ಇದನ್ನು ಅವನ ಬಳಿ ಹೇಳುವುದು ಹೇಗೆಂದು ಆಕೆಗೆ ತೋಚಲಿಲ್ಲ. ತನ್ನ ಬಗ್ಗೆ ಏನೆಂದುಕೊಂಡನೋ ಎಂಬ ಭಯ.
ಹೀಗಿರುವಾಗ ಆಕೆಗೆ ತನ್ನ ದೈಹಿಕ ಮನೋಕಾಮನೆಗಳನ್ನು ಅದುಮಿಡಲು ಸಾಧ್ಯವಾಗದಿದ್ದಾಗ ಅಚಾನಕ್ಕಾಗಿಯೇ ಒಂದು ದಿನ ಇವರ ನಡುವೆ ದೈಹಿಕ ಸಂಪರ್ಕ ಏರ್ಪಟ್ಟಿತು. ನಂತರ ಆಕೆಗೆ ಗಣೇಶನನ್ನು ಭೇಟಿಯಾಗಲು ಮುಜುಗರ. ಆದರೆ, ಇವರಿಬ್ಬರ ಸಮ್ಮಿಲನದ ಕಾಣಿಕೆಯಾಗಿ ಅವನ ಮಗುವನ್ನು ಭುವಿಗೆ ಬಿಟ್ಟು ಆಕೆ ಮಾತ್ರ ಆಕಾಶ ಸೇರಿಕೊಂಡಿದ್ದಾಳೆ. ಮಗುವಿರುವ ಅನಾಥಾಶ್ರಮದ ವಿಳಾಸವನ್ನು ಡೈರಿಯಲ್ಲಿ ನಮೂದಿಸಿ, ಡೈರಿ ಯಾರ ಕೈಗೆ ಸಿಗುತ್ತೋ ಅವರು ಮಗುವನ್ನು ಗಣೇಶನೊಡನೆ ಸೇರಿಸಲು ಸಹಾಯ ಮಾಡುವಂತೆ ಕೋರಿದ್ದಾಳೆ.
ಇದನ್ನು ಓದಿ ನನ್ನ ಹೃದಯ ಒಮ್ಮೆಲೆ ಸ್ತಬ್ಧವಾಯಿತು. ಅವನನ್ನು ಹೇಗೆ ಹುಡುಕುವುದೆಂದು ಯೋಚಿಸುತ್ತಿರುವಾಗ ಪರಶು, 'ಏಯ್ ಕಲ್ಲಿಕೋಟೆ ಬಂತು ಇಳಿ' ಎಂದಾಗಲೇ ಗೊತ್ತಾಗಿದ್ದು, ಇದೆಲ್ಲಾ ಕನಸು! ನಾನು ಅವರೊಡನೆಯೇ ಮಲಗಿದ್ದೆ. ಆ ದಿನ ನಾನು ವಾಸ್ತವಕ್ಕೆ ಬರಲು ಸಾಧ್ಯವಾಗಲೇ ಇಲ್ಲ. ಕನಸಾದರೂ ಅದು ಪ್ರೀತಿ ಮತ್ತು ಇಂದಿನ ಯಾಂತ್ರಿಕ ಬದುಕಿನ ಚಿತ್ರಣವನ್ನು ತೆರೆದಿಟ್ಟಿದ್ದಂತೂ ನಿಜ.
this story published at Kushi,