20.2.15

ಮೇಕ್ ಇನ್ ಇಂಡಿಯಾದ ಸವಾಲುಗಳು



ಎಲ್ಲೆಡೆ ಮೇಕ್ ಇನ್ ಇಂಡಿಯಾದೇ ಸುದ್ದಿ. ಟಿ.ವಿ, ಪತ್ರಿಕೆ, ರೇಡಿಯೋ ಹಾಗು ಸಾಮಾಜಿಕ ಜಾಲತಾಣಗಳಲ್ಲಿ ಹಾಟ್ ಟಾಫಿಕ್ ನಂತೆ ಚರ್ಚಿತವಾಗುತ್ತಿರುವುದು ‘ಮೇಕ್ ಇನ್ ಇಂಡಿಯಾ’. ಅಸಲಿಗೆ ಈ ಘೋಷಣೆ ಸುದ್ದಿಯಾದಷ್ಟು, ಅದನ್ನು ಕಾರ್ಯಗತಗೊಳಿಸಲು ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ಸ್ಪಷ್ಟ ರೂಪುರೇಷೆಗಳನ್ನು ಪ್ರಕಟಿಸಿಲ್ಲ. ಪತ್ರಿಕೆ ಹಾಗು ಟಿ.ವಿ ಗಳಲ್ಲಿ ‘ಮೇಕ್ ಇನ್ ಇಂಡಿಯಾ’ ಕಾರ್ಯರೂಪಕ್ಕೆ ತರಲು ಸರ್ಕಾರ ಹಾಗು ಸಾರ್ವಜನಿಕರ ಪಾತ್ರದ ಬಗ್ಗೆ ಚರ್ಚೆಗಳು ಇಲ್ಲವೇ ಲೇಖನಗಳು ಪ್ರಕಟನೆಗೊಂಡಿರುವುದು ಬೆರಳೆಣಿಕೆ ಮಾತ್ರ.
ಪ್ರಸ್ತುತ ಭಾರತವನ್ನು ಒಂದು ತಯಾರಿಕಾ ದೇಶವನ್ನಾಗಿ ಮಾಡಬೇಕು ಎಂಬುದು ‘ಮೇಕ್ ಇನ್ ಇಂಡಿಯಾ’ದ ಮೂಲ ಮಂತ್ರ. ಪ್ರಧಾನಿಯವರ ಈ ದೂರದೃಷ್ಠಿ ನಿಲುವು ಸ್ವಾಗತರ್ಹವಾಗಿದೆ. ಜಾಗತಿಕ ಮಟ್ಟದಲ್ಲಿ ಭಾರತದ ಅರ್ಥವ್ಯವಸ್ಥೆ ಬಲಗೊಳ್ಳಬೇಕಾದರೆ ಇದು ಅನಿವಾರ್ಯವು ಆಗಿದೆ. ಆದರೆ ಮೇಕ್ ಇನ್ ಇಂಡಿಯಾ ಉದ್ದೇಶದಲ್ಲಿ ಪೂರ್ಣ ಯಶಸ್ಸುಗಳಿಸುವುದು ಸುಲಭದ ಮಾತಲ್ಲ. ಹಾಗೆಂದು ಆಸಾಧ್ಯವಂತು ಅಲ್ಲವೇ ಅಲ್ಲ. ಈ ನಿಟ್ಟಿನಲ್ಲಿ ಭಾರತ ಯಶಸ್ಸು ಕಾಣಬೇಕೆಂದರೆ ಮೋದಿ ಸರ್ಕಾರ ಕೆಲ ಕಠಿಣ ಸವಾಲುಗಳನ್ನು ಎದುರಿಸಬೇಕು.
1.   ಬಂಡವಾಳ
ಬಂಡವಾಳವಿಲ್ಲದೇ ಮೇಕ್ ಇನ್ ಇಂಡಿಯಾ ಕಾನ್ಸೆಪ್ಟ್ ಅನ್ನು ಊಹಿಸಿಕೊಳ್ಳಲು ಅಸಾಧ್ಯ. ಭಾರತವನ್ನು ಬೃಹತ್ ತಯಾರಿಕಾ ದೇಶವನ್ನಾಗಿಸಲು, ಅಷ್ಟೇ ಬೃಹತ್ ಪ್ರಮಾಣದ ಬಂಡವಾಳ ಅವಶ್ಯಕ.
ಮೊದಲು ದೇಶಿಯವಾಗಿ ಬಂಡವಾಳ ಕ್ರೂಢಿಕರಿಸಲು ಕ್ರಮ ಕೈಗೊಳ್ಳಬೇಕು. ಜನರನ್ನು ಜಡತ್ವ ಹೂಡಿಕೆಗಳಾದ ಚಿನ್ನ, ವಜ್ರ ಹಾಗು ಇನ್ನಿತರ ಆಭರಣಗಳ ಮಾಡುವ ಹೂಡಿಕೆಯನ್ನು ಕಡಿಮೆ ಮಾಡಿ ಚಲನಶೀಲ ಹೂಡಿಕೆಗಳಲ್ಲಿ ಬಂಡವಾಳ ಹೂಡುವಂತೆ ಪೇರೆಪಿಸಬೇಕು. ಕೊಳ್ಳುಬಾಕ ಸಂಸ್ಕೃತಿಯ ಸಾಗರದೊಳಗೆ ಬಿದ್ದಿರುವ ಜನಾಂಗವನ್ನು ಎತ್ತಿ ಉಳಿತಾಯದ ದಡಕ್ಕೆ ಸೇರಿಸಬೇಕು. ಕಪ್ಪು ಹಣವಾಗಿ ಸೋರಿ ಹೋಗುತ್ತಿರುವ ತೆರಿಗೆ ಹಣದ ಕಡಿವಾಣಕ್ಕೆ ಕಟ್ಟುನಿಟ್ಟಿನ ಕಾನುನು ಜಾರಿಗೊಳಿಸಬೇಕು.
 ಇನ್ನೊಂದೆಡೆ ವಿದೇಶಿ ಬಂಡವಾಳವನ್ನು ಆಕರ್ಷಿಸುವೆಡೆಗೆ ಗಮನ ಹರಿಸಬೇಕು. ಅನಿವಾಸಿ ಭಾರತೀಯರಿಗೆ ಭಾರತದಲ್ಲಿ ಬಂಡವಾಳ ಹೂಡಲು ಕೆಲ ತೆರಿಗೆ ರಿಯಾಯಿತಿಯನ್ನು ಘೋಷಿಸಬೇಕು. ನೇರ ವಿದೇಶಿ ಹೂಡಿಕೆಯ ಮಿತಿಯನ್ನು ಹೆಚ್ಚಿಸಬೇಕು.  ಜೊತೆಗೆ ನಮ್ಮಲ್ಲಿಂದ ವಿದೇಶಕ್ಕೆ ಹಾರಿಹೋದ ಕಪ್ಪು ಹಣವನ್ನು ಆದಷ್ಟು ಬೇಗನೆ ವಾಪಸ್ಸು ತರುವಲ್ಲಿ ಪ್ರಯತ್ನಗಳಾಗಬೇಕು.
2.     ಮೂಲಭೂತ ಸೌಕರ್ಯ
ಮೇಕ್ ಇನ್ ಇಂಡಿಯಾ ಯಶಸ್ಸುಗಳಿಸಲು ಮೂಲಭೂತ ಸೌಕರ್ಯವು ಮಹತ್ತರ ಪಾತ್ರ ವಹಿಸುತ್ತದೆ. ಭಾರತದಲ್ಲಿ ಉದ್ಯಮವೊಂದನ್ನು ಪ್ರಾರಂಭಿಸಲು ಮುಂದಾದವರಿಗೆ ಎದುರಾಗುವ ಪ್ರಮುಖ ಸಮಸ್ಯೆ ಮೂಲಭೂತ ಸೌಕರ್ಯದ ಕೊರತೆ.  ಒಂದು ಕಾರ್ಖಾನೆ ಸ್ಥಾಪಿಸಲು ಬೇಕಾದ ಮೂಲಭೂತ ಸೌಕರ್ಯಗಳಾದ ಭೂಮಿ, ವಿದ್ಯುತ್, ರಸ್ತೆ, ನೀರು ಮುಂತಾದ ವ್ಯವಸ್ಥೆಗಳನ್ನು ಒದಗಿಸಬೇಕು. ಅತ್ತ್ಯುತ್ತಮ ಮೂಲಭೂತ ಸೌಕರ್ಯು  ಒದಗಿಸಿದಲ್ಲಿ ದೇಶಿಯವಾಗಿ ಬಂಡವಾಳ ಹೂಡಲು ಉದ್ಯಮಶೀಲರು ಮುಂದೆ ಬರುವುದಲ್ಲದೇ, ವಿದೇಶಿ ಉದ್ಯಮಗಳು ಭಾರತಕ್ಕೆ ಕಾಲಿಡಲು ಮನಸ್ಸು ಮಾಡುತ್ತವೆ.
3.     ಮಾನವ ಸಂಪನ್ಮೂಲ
ಮಾನವ ಸಂಪನ್ಮೂಲಕ್ಕೆ ಭಾರತದಲ್ಲೇನು ಕೊರತೆಯಿಲ್ಲ ನಿಜ. ಆದರೆ ಕೊರತೆಯಿರುವುದು ಉದ್ಯಮಶೀಲತೆಯುಳ್ಳದ ಹಾಗು ಅಕೌಶಲ್ಯಯುಕ್ತ ಮಾನವ ಸಂಪನ್ಮೂಲ. ಇವುಗಳ ದುಸ್ಥಿಗೆ ಪ್ರಮುಖ ಕಾರಣ ಹುಡುಕಿದರೆ ಸಿಗುವುದು ನಮ್ಮ ದೇಶದ ಶಿಕ್ಷಣ ವ್ಯವಸ್ಥೆ. ಮೊದಲು ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆ ತರಬೇಕು. ಇನ್ನು ಮೂಲ ಶಿಕ್ಷಣ ಪದ್ಧತಿಗೆ ಅಂಟಿಕೊಂಡಿರುವ ಶಿಕ್ಷಣ ವ್ಯವಸ್ಥೆ ಮೊದಲು ಬದಲಾಗಬೇಕು. ವೃತ್ತಿಪರ ಶಿಕ್ಷಣಕ್ಕೆ ಒತ್ತು ನೀಡಬೇಕು. ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳನ್ನು ನೌಕರಿ ಮನೋಭಾವದಿಂದ ಉದ್ಯಮಶೀಲ ಮನೋಭಾವಕ್ಕೆ ಬದಲಿಸುವಲ್ಲಿ ಪ್ರಯತ್ನಿಸಬೇಕು. ಕಳೆದ ದಶಕದಿಂದ ಇಚೇಗೆ ಶೇ. 20 ರಷ್ಟು ಜನರು ಕೃಷಿಯಿಂದ ಕೈಗಾರಿಕಾ ಕ್ಷೇತ್ರದೆಡೆಗೆ ವಲಸೆ ಬಂದಿದ್ದಾರೆ. ಮತ್ತೆ ಶೇ 60 ರಷ್ಟು ಅಸಂಟಿತ ಕ್ಷೇತ್ರದ ಕಾರ್ಮಿಕರಾಗಿದ್ದಾರೆ. ಇವರೆಲ್ಲಿ ಕೆಲವರು ಅನಕ್ಷರಸ್ಥರಾಗಿದ್ದರೆ ಮತ್ತೆ ಕೆಲವರು ಕೇವಲ ಪ್ರಾಥಮಿಕ ಶಿಕ್ಷಣವನ್ನಷ್ಟೇ ಪಡೆದವರಾಗಿದ್ದಾರೆ. ಇವರಿಗೆಲ್ಲಾ ಕೌಶಲ್ಯದ ತರಬೇತಿ ನೀಡುವುದು ಸರ್ಕಾರದ ಮುಂದಿನ ಕಠಿಣ ಸವಾಲಾಗಿದೆ.
ಸಾರ್ವಜನಿಕರ ಪಾತ್ರ
ಮೇಕ್ ಇನ್ ಇಂಡಿಯಾ ಯಶಸ್ಸುಗಳಿಸಬೇಕಾದರೆ ಸರ್ಕಾರ ಮಾತ್ರ ಪ್ರಯತ್ನ ಪಟ್ಟರೆ ಸಾಲದು ಸಾರ್ವಜನಿಕರ ಪ್ರಯತ್ನವೂ ಬೇಕು. ಹೆಚ್ಚು ಹೆಚ್ಚು ಉದ್ಯಮಶೀಲ ಮನೋಭಾವ ಬೆಳಸಿಕೊಳ್ಳಬೇಕು. ಕಾರ್ಮಿಕರು ತಮ್ಮ ಕೌಶಲ್ಯ ವೃಧ್ಧಿಗಾಗಿ ಕೆಲ ಸಮಯ ಮೀಸಲಿಡಬೇಕು.ಮಹಿಳೆಯರು ಮನಸ್ಸು ಮಾಡಿ ತಾವು ಕೌಶಲ್ಯ  ತರಬೇತಿ ಪಡೆದುಕೊಳ್ಳುವುದಲ್ಲದೇ ತಮ್ಮ ಕುಟುಂಬದವರಿಗೂ ಕೂಡ ತರಬೇತಿ ಪಡೆದುಕೊಳ್ಳುವಂತೆ ಪ್ರೇರೇಪಿಸಬೇಕು.
ಅಂತಿಮವಾಗಿ ಈ ಎಲ್ಲಾ ಸವಾಲುಗಳನ್ನು ಎದುರಿಸಲು ಸರ್ಕಾರ ಸಜ್ಜಾಗಬೇಕು. ಭಾರತ ದೇಶದ ಪ್ರಜೆಗಳಾಗಿ ನಾವುಗಳೆಲ್ಲ ಸಹಕಾರ ನೀಡಬೇಕು. ಆಗ ಮಾತ್ರ ಮೋದಿಯವರ ‘ಮೇಕ್ ಇನ್ ಇಂಡಿಯಾ’, ‘ಮೈಕ್ ಇನ್ ಇಂಡಿಯ’ವಾಗಷ್ಟೇ ಉಳಿಯದೇ ಸದೃಡ ಭಾರತದ ನಿರ್ಮಾಣಕ್ಕೆ ನಾಂದಿಯಾಗುತ್ತದೆ.

No comments:

Post a Comment