25.2.14

ಮಾಡರ್ನ್ ಪೋಸ್ಟ್

ಮಾಡರ್ನ್ ಪೋಸ್ಟ್

This article published at Kannada Prabha on 25/02/2014

ಸಿಓಡಿ ಕೂಡ ಲಭ್ಯ!

ಭಾರತೀಯ ಅಂಚೆ ಇಲಾಖೆ ಇತ್ತೀಚಿನ ದಿನಗಳಲ್ಲಿ ಹಲವು ಬದಲಾವಣೆಗೆ ತೆರೆದುಕೊಂಡಿದೆ. ಅದರಲ್ಲಿ ಪಾರ್ಸೆಲ್ ಸೇವೆಯೂ ಒಂದು. ಅದಕ್ಕೆ ಪೂರಕವಾಗಿ 'ಬಿಸಿನೆಸ್ ಪಾರ್ಸೆಲ್ ಸೇವೆ' ಆರಂಭಿಸಿದೆ. ಈ ಸೇವೆಯ ಮೂಲಕ ಪಾರ್ಸೆಲ್ ಸೇವೆ ಇ-ಮಾರುಕಟ್ಟೆ ವಹಿವಾಟಿಗೆ ಕಾಲಿಟ್ಟಿದೆ. ಅತಿ ಕಡಿಮೆ ದರದಲ್ಲಿ ಸೇವೆಯನ್ನು ನೀಡುವ ಜೊತೆಗೆ ಪ್ರತಿ ಹಂತದ ಟ್ರ್ಯಾಕಿಂಗ್ ಸೌಲಭ್ಯ ನೀಡಲು ಇಲಾಖೆ ಮುಂದಾಗಿದೆ. ಸಿ.ಓ.ಡಿ (ಕ್ಯಾಶ್ ಆನ್ ಡೆಲಿವರಿ) ಸೌಲಭ್ಯವೂ ಇದೆ.
ಈ ಸೇವೆಯಿಂದ ಬಲ್ಕ್  ಗ್ರಾಹಕರಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಈ ಹಿಂದೆ ಸಾಧಾರಣ ಪಾರ್ಸೆಲ್ ಹಾಗೂ ನೋಂದಾಯಿತ ಪಾರ್ಸೆಲ್ ಸೇವೆಯಲ್ಲಿ ಕನಿಷ್ಠ 4  ಕೆ.ಜಿ. ಯಿಂದ ಗರಿಷ್ಠ 20 ಕೆ.ಜಿ. ವರೆಗೆ ಪಾರ್ಸೆಲ್ ಬುಕ್ ಮಾಡಬಹುದಿತ್ತು.

ಈ ಹೊಸ ಸೇವೆಯಲ್ಲಿ 2 ಕೆ.ಜಿ. ಯಿಂದ 35 ಕೆ.ಜಿ ಯವರೆಗೆ ಪಾರ್ಸೆಲ್ ಬುಕ್ ಮಾಡಬಹುದು. ಭಾರತದಾದ್ಯಂತ ಈ ಸೇವೆ ಲಭ್ಯವಿದೆ. ಈ ಸೇವೆಯಲ್ಲಿ ಪಾರ್ಸೆಲ್ ಎಷ್ಟೇ ತೂಕದ್ದಾಗಿದ್ದರೂ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸಲಾಗುತ್ತದೆ. ಕಾರ್ಪೊರೇಟ್ ಗ್ರಾಹಕರಿದ್ದರೆ ಪಾರ್ಸೆಲ್ ಅನ್ನು  ಅವರ ಸ್ಥಳದಿಂದಲೇ ಪಿಕ್‌ಅಪ್ ಮಾಡುವ ಸೌಲಭ್ಯವಿದೆ. ಈ ಗ್ರಾಹಕರು ಹಣವನ್ನು ಮುಂಗಡವಾಗಿ ಪಾವತಿ ಮಾಡಬಹುದು ಇಲ್ಲವೇ ಬುಕಿಂಗ್ ವೇಳೆ ನೀಡಬಹುದು. ಇವರಿಗಾಗಿ ಕ್ರೆಡಿಟ್ ಸೌಲಭ್ಯ ಸಿಗುತ್ತದೆ. ಕಾರ್ಪೊರೇಟ್ ಗ್ರಾಹಕರ ಗುಣವನ್ನರಿತ ಇಲಾಖೆಯು ಹೆಚ್ಚಿನ ಮೊತ್ತದ ಸರಕುಗಳ ಪಾರ್ಸೆಲ್ ಹಸ್ತಾಂತರಿಸುವ ವೇಳೆ ಹಣ ವಸೂಲಾತಿ ಮಾಡಲಾಗುತ್ತದೆ. ಇದನ್ನೇ  ಸಿ.ಓ.ಡಿ (ಕ್ಯಾಶ್ ಆನ್ ಡೆಲಿವರಿ) ಸೇವೆ ಎಂದು ಕರೆಯಲಾಗುತ್ತದೆ. ಸುಮಾರು ರು. 50,000 ದವರೆಗೆ ಈ ಸೌಲಭ್ಯ ಲಭ್ಯವಿದೆ.

ಬಿಸಿನೆಸ್ ಪಾರ್ಸೆಲ್‌ಗೆ ಗ್ರಾಹಕರು 2 ಕೆಜಿಗೆ 45 ರಿಂದ 115,  ನಂತರದ 1 ರಿಂದ 5 ಕೆ.ಜಿ.ಗೆ 12-30, ನಂತರದ ಪ್ರತಿ ಒಂದು ಕೆ.ಜಿ.ಗೆ 4 ರಿಂದ 32  ನೀಡಬೇಕಾಗುತ್ತದೆ. ಹೆಚ್ಚಿನ ಮಾಹಿತಿಗೆ ಸ್ಥಳೀಯ ಅಂಚೆ ಕಚೇರಿಗೆ ಭೇಟಿ ಕೊಡಿ. ಇಲ್ಲದಿದ್ದರೆ www.indiapost.gov.in ಲಾಗಿನ್ ಆಗಬೇಕು.