7.7.17

ಅಪ್ಪುಗೆ


ಅಂದು ಬರಗಾಲದ ಸಮಯದಲಿ
ಎನ್ನೆದೆಯ ಮೂಲೆಯೆಲಿ
ನೀನೂರಿದ ಒಲವ ಬೀಜಕೆ
ಮಳೆಹನಿಯು ಸೋಕದೆ
ಮುದುಡಿ ಕುಳಿತಿಹುದು ಮೊಳಕೆಯೊಡೆಯದೆ.

ಇನ್ನು ಆರದ ನಿನ್ನಯ
ಭರವಸೆಯ ಬೆಳಕ ಶಾಖಕೆ
ಕಾರ್ಮೋಡವೇ ಕರಗಿ
ಧಾವಿಸುತಿಹುದು ನಿನ್ನಯ
ಬೆಚ್ಚನೆಯ ಅಪ್ಪುಗೆಗೆ.

ನಮ್ಮಿಬ್ಬರ ಬಿಸಿಯುಸಿರ
ಅಪ್ಪುಗೆಯ ಫಲದಿ
ಬೀಜವೊಂದು ಮೊಳಕೆಯೊಡೆದು
ಎರಡೆಲೆಯ ನಡುವಣದಿ
ಇಣುಕಿ ನೋಡುತಿಹುದು ಇಂದು.

2.1.17

ಗೆಳತಿ


ನಿನ್ನಯ ಪ್ರೀತಿಯ ಅಮಲಿನಲಿ
ಕಳೆದ ಈ ಏಳು ವರುಷದಲಿ
ನಿನ್ನ ಪ್ರೀತಿ ಪಡೆವ ಭರದಲಿ
ಸತ್ಯವೊಂದನ್ನು ಮುಚ್ಚಿಟ್ಟಿದ್ದೆ ಎನ್ನೆದೆಯಲಿ.

ಇಂದು ಹೇಳೆ ಬಿಡುವ ತವಕದಲಿ
ಹೆಜ್ಜೆಯನ್ನಿಡುತ್ತಿದ್ದೆ ಕಡಲ ತೀರದಲಿ
ಒಂದೆಡೆ ಬೇಡವೆನ್ನುವ ಬುದ್ದಿಯಲಿ
ಮತ್ತೊಮ್ಮೆ ಹೇಳು ಎನ್ನುವ ಮನಸಿನಲಿ

ಆಗ ರವಿ ಕಂಡ ಕಿವಿಯೋಲೆಯ ಅಂಚಿನಲಿ
ಮುಂಗುರುಳು ಉಯ್ಯಾಲೆಯಾಡುತ್ತಿತ್ತು ತಂಗಾಳಿಯಲಿ
ಕೇಸರಿ ಕಿರಣಗಳು ನರ್ತಿಸುತ್ತಿದ್ದವು ನಿನ್ನೀ ಕೆಂದುಟಿಯಲಿ
ಆಗ ಕಡಲಲೆಯ ಹನಿಯೊಂದು ಜಿಗಿದು ಮುತ್ತಿಕ್ಕಿತು ಕೆನ್ನೆಯಲಿ

ತುಟಿಯಿಂದ ಸತ್ಯ ಹೊರ ಬಿತ್ತು ಕಳವಳದಲಿ
ಆ ಕ್ಷಣಕೆ ನಿನ್ನ ಚಪ್ಪಲಿ ಎಡವಿತು ಉಸುಕಿನಲಿ
ಇಬ್ಬರು ಒಬ್ಬರಮೇಲೊಬ್ಬರು ಬಿದ್ದೆವು ಮರಳಿನಲಿ
ಈ ವಿಷಯ ಮೊದಲೇ ತಿಳಿದಿತ್ತೆಂದು ಸನ್ನೆ ಮಾಡಿದೆ ನೀ ಕಣ್ಣಂಚಿನಲಿ.